ಕೋಲ್ವಿಲಿಯ 

ಸುಂದರವಾದ ಹೂಬಿಡುವ ಅಲಂಕಾರದ ಮರ. ಲೆಗ್ಯೂಮಿನೋಸೀ ಕುಟುಂಬಕ್ಕೆ ಸೇರಿದೆ. ಇದನ್ನು ಉದ್ಯಾನವನಗಳಲ್ಲಿ ರಸ್ತೆಯ ಪಕ್ಕಗಳಲ್ಲಿ ಮತ್ತು ವಿಶಾಲವಾದ ಮನೆಗಳ ಪಕ್ಕದಲ್ಲಿ ಬೆಳೆಸುತ್ತಾರೆ. ಹೆಸರಾಂತ ಪ್ರವಾಸಿ ಬೋಜರ್ ಎಂಬಾತ ಮಡಗಾಸ್ಕರಿನ ಪಶ್ಚಿಮ ತೀರಪ್ರದೇಶದಲ್ಲಿ ಇದನ್ನು ಮೊಟ್ಟಮೊದಲಬಾರಿಗೆ ಕಂಡ (1824). ಇದರಲ್ಲಿ ರೇಸಿಮೋಸ ಎಂಬ ಒಂದೇ ಪ್ರಭೇದವಿದೆ. ಮಡಗಾಸ್ಕರ್ ದ್ವೀಪದ ಮೂಲವಾಸಿಯಾದ ಇದು ಸುಮಾರು 20'-50' ಎತ್ತರ ಬೆಳೆಯುತ್ತದೆ. ಇದರ ಕಾಂಡದ ಬಣ್ಣ ಬೂದು. ತೊಗಟೆ ಅವ್ಯವಸ್ಥಿತ ಬಿಲ್ಲೆಗಳಾಗಿ ಉದುರುತ್ತವೆ. ಹೂ ಅರಳಿಲ್ಲದಾಗ ಕೋಲ್ವಿಲಿಯ ಕತ್ತಿಕಾಯಿ ಮರವನ್ನು ಹೋಲುತ್ತದೆ. ಈ ಮರ ಆಗಸ್ಟ್-ನವಂಬರ್ ತಿಂಗಳುಗಳಲ್ಲಿ ಆಕರ್ಷಕವಾದ ಹೂಗೊಂಚಲನ್ನು ಬಿಡುತ್ತದೆ. ಹೂಗೊಂಚಲು ಅಂತ್ಯಾರಂಭಿ ಮಾದರಿಯದು; ಸುಮಾರು 1ಳಿ ಉದ್ದವಾಗಿದೆ. ಒಂದೊಂದು ಹೂಗೊಂಚಲಿನಲ್ಲಿ ಸುಮಾರು 200 ಹೂಗಳು ನಿಬಿಡವಾಗಿ ಜೋಡಿಸಲ್ಪಟ್ಟಿರುತ್ತವೆ. ಹೂ ಕೇಸರಿ ಬಣ್ಣಕ್ಕಿದ್ದು ನೋಡಲು ಬಲು ಅಂದವಾಗಿವೆ. ಈ ಮರ ಕಾಯಿಬಿಡುವುದು ಅಪೂರ್ವ. 	   (ಎಸ್.ಕೆ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ